ಅಧ್ಯಾತ್ಮ ವಿಭಾಗ – ಫೆಬ್ರವರಿ 2026.
ಡಾ || ನಾಗೇಶ್ ಎಲ್ ( ದಂತ ವೈದ್ಯರು ) ಅವರು, ಈ ವಿಭಾಗಕ್ಕೆ , ಪ್ರತಿ ತಿಂಗಳೂ , ಶ್ರೀ ಡಿ ವಿ ಗುಂಡಪ್ಪ ನವರ ” ಮಂಕುತಿಮ್ಮನ ಕಗ್ಗ” ದ ಒಂದೊಂದು ಪದ್ಯಕ್ಕೆ ವಿವರಣೆ ಕೊಡಲು ಒಪ್ಪಿದ್ದಾರೆ . ಆವರಿಗೆ ನನ್ನ ಧನ್ಯವಾದಗಳು .
ಮಂಕುತಿಮ್ಮನ ಕಗ್ಗದ ಜೀವನ ಸಂದೇಶ
ಡಿವಿಜಿ ಅಂದರೆ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ, ಕನ್ನಡ ಸಾಹಿತಿಗಳು ಅದ್ಭುತ ಕೃತಿಗಳನ್ನು ರಚಿಸಿದ್ದಾರೆ ಸರಳ ಜೀವನ ಉನ್ನತ ಯೋಜನೆಗಳನ್ನು ಜೀವನದಲ್ಲಿ ರೂಡಿಸಿಕೊಂಡಿದ್ದ ಮಹಾನ್ ಚೇತನ.ಅವರು ಅತ್ಯಂತ ಪ್ರಾಮಾಣಿಕ ಜೀವನವನ್ನು ನಡೆಸಿ, ಇತರರಿಗೆ ಮಾದರಿಯಾಗಿದ್ದರು.
ಕ್ರಿ.ಶ 1948ರಲ್ಲಿ ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಪ್ರಾರಂಭಿಸಿ, ಸಮಾಜದ ಸುಧಾರಣೆಯಲ್ಲಿ ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡರು. ಆ ಸಂಸ್ಥೆಯ ಆಶಯವೆಂದರೆ, “ಸಾರ್ವಜನಿಕ ಜೀವನವನ್ನು ಆಧ್ಯಾತ್ಮಿಕರಣ ಗೊಳಿಸುವುದು” .ಎಂತಹ ಉದಾತ್ತ ಗುರಿ ಅವರದು! ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ದಿವ್ಯ ಔಷಧಿ ಈ ಆಶಯದಲ್ಲಿ ಅಡಗಿದೆಯಲ್ಲವೇ ?
ಡಿವಿಜಿಯವರು ಒಟ್ಟು 945 ಕಗ್ಗ ಗಳನ್ನು ಮಂಕುತಿಮ್ಮನ ಕಗ್ಗ ಎಂಬ ಹೆಸರಿನಲ್ಲಿ ಬರೆದಿದ್ದಾರೆ. ಈ ಕಗ್ಗಗಳು, 4 ಸಾಲಿನ ಮುಕ್ತಕಗಳು. ತತ್ವ ಪ್ರಧಾನವಾದ, ಆಳ ಅರ್ಥವನ್ನು ಹೊಂದಿದ, ಜೀವನಕ್ಕೆ ಮಹತ್ತರವಾದ ಸಂದೇಶವನ್ನು ನೀಡುವ ಈ ಕಗ್ಗಗಳು, ಅವರ ಅನುಭವ ಮತ್ತು ಅನುಭಾವಗಳ ಸಮ್ಮಿಳಿತದಿಂದ ಮೂಡಿಬಂದಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಹೇಳಬಹುದು.
ಈ ಕಗ್ಗಗಳಿಂದ ಕೆಲವನ್ನು ಆರಿಸಿಕೊಂಡು, ಅವುಗಳ ಸಂಕ್ಷಿಪ್ತ ಸಾರಾಂಶವನ್ನು ನಿಮಗೆ ನೀಡುವ ಒಂದು ಪ್ರಯತ್ನವನ್ನು ಈ ಸರಣಿ ಲೇಖನಗಳಲ್ಲಿ ನಾನು ಮಾಡುತ್ತೇನೆ.
ಸೃಷ್ಟಿ, ಸೃಷ್ಟಿಕರ್ತ, ಮನುಷ್ಯರು ,ಜೀವನ, ಮರಣ -ಇವುಗಳ ಬಗ್ಗೆ ಆಳವಾದ ವಿಚಾರಗಳನ್ನು ಗುಂಡಪ್ಪನವರು ಕಗ್ಗಗಳ ಮೂಲಕ ,ನಮ್ಮೊಡನೆ ಹಂಚಿಕೊಂಡಿದ್ದಾರೆ. ಆ ಕಗ್ಗಗಳು ನಮ್ಮನ್ನು ಚಿಂತನೆಗೆ ಹಚ್ಚಿ , ಪ್ರಜ್ಞೆಯ ಆರೋಹಣವನ್ನು ಉಂಟುಮಾಡಲಿ ಎಂದು ಆಶಿಸುತ್ತಾ
-ನಿಮ್ಮ ಡಾ|| ನಾಗೇಶ್ ಎಲ್
ಕಗ್ಗ -1
ಇಹುದೊ ಇಲ್ಲವೊ ತಿಳಿಯಗೊಡದ-ದೊಂದು
ನಿಜಮಹಿಮೆಯಿಂ ಜೀವವೇಷದಲಿ ಜಗವಾಗಿ |
ವಿಹರಿಪುದು ಅದೊಳ್ಳಿತೆಂಬುದು ನಿಸದವಾದೊಡೆ
ಆ ಗಹನತತ್ತ್ವಕೆ ಶರಣೊ – ಮಂಕುತಿಮ್ಮ ||
ಏನನ್ನು ನಾವು ಭಗವಂತನೆಂದು ಅಂದುಕೊಳ್ಳುತ್ತೇವೋ, ಅದು ನಮ್ಮ ಇಂದ್ರಿಯಗಳಿಗೆ, ಮನಸ್ಸಿಗೆ , ನಿಲುಕದ ಒಂದು ತತ್ವವಾಗಿ ಇದೆ. ಅದು ಇದೆಯೋ ಇಲ್ಲವೋ ಎಂದು ನಮ್ಮ ಪ್ರಜ್ಞೆಗೆ ಈ ಹಂತದಲ್ಲಿ ತಿಳಿಯಲಾಗದಾಗಿದೆ.
ಆದರೆ, ಆ ತತ್ವ ತನ್ನ ಮಹಿಮೆಯಿಂದ, ವ್ಯಕ್ತ ಪ್ರಪಂಚವಾಗಿ ಮತ್ತು ಆ ಪ್ರಪಂಚದಲ್ಲಿ ನಾನಾ ವೇಶಗಳನ್ನು ಧರಿಸಿದ ಜೀವಿಗಳಾಗಿ ವಿಹರಿಸುತ್ತಿದೆ .ಅಂದರೆ ಭಗವಂತನ ವ್ಯಕ್ತ ರೂಪವೇ ಈ ಅಖಿಲಾಂಡ ಕೋಟಿ ಬ್ರಹ್ಮಾಂಡ.
ಸೃಷ್ಟಿಯನ್ನು ಮಾಡಿ ಭಗವಂತ ದೂರ ಎಲ್ಲೂ ಹೋಗಿ ಅಡಗಿ ಕುಳಿತಿಲ್ಲ . ಸೃಷ್ಟಿಯ ಅಣು ರೇಣು ತೃಣ ಕಾಷ್ಟದಿಗಳಲ್ಲಿ ದಿವ್ಯ ಸ್ಪಂದನಗಳು ಅಡಗಿ ಕುಳಿತಿದ್ದಾನೆ.
ನಾನಾ ಜೀವಿಗಳಲ್ಲಿ ನಾನಾ ರೂಪಗಳಲ್ಲಿ ಒಳಿತೆಂಬ ರೂಪದಲ್ಲಿ ವಿಹರಿಸುತ್ತಾ ಇದೆ, ಆ ದಿವ್ಯಶಕ್ತಿ.
ವಿಜ್ಞಾನದ ಪ್ರಕಾರ. ಈ ಜಗತ್ತಿನಲ್ಲಿ ಎಲ್ಲವೂ ಅಣುಗಳಿಂದ ಮಾಡಲ್ಪಟ್ಟಿದೆ .ಪ್ರತಿ ಅಣುವೂ ನಿರಂತರವಾಗಿ ಕಂಪಿಸುತ್ತಿದೆ. ಆ ಕಂಪನಗಳಿಗೆ ಕಾರಣವೇನೆಂದರೆ, ಅದರಲ್ಲಿ ಅಡಗಿರುವ ಚೈತನ್ಯವೇ ಆಗಿದೆ. ಆ ಚೈತನ್ಯವನ್ನೇ ನಾವು ಭಗವಾನ್, ಭಗವಂತನೆಂದು ಭಾವಿಸುತ್ತೇವೆ . ಸರ್ವಶಕ್ತ ಪರಮಾತ್ಮ , ಜಗತ್ತಿನಲ್ಲಿ ಸರ್ವ ವ್ಯಾಪ್ತಿಯಾಗಿದ್ದಾನೆಂದು ಎಂಬುದು ನಮಗೆ ನಿಶ್ಚಿತವಾದ ಮೇಲೆ , ಆ ಗಹನವಾದ ಪರತತ್ವಕ್ಕೆ ನಾವು ಶರಣಾಗಬೇಕು ಎಂಬುದು ಗುಂಡಪ್ಪನವರ ಅಭಿಮತ.
ಶರಣಾಗತಿ ಎಂಬುದು ಒಂದು ಬಹುಮುಖ್ಯ ಪ್ರಕ್ರಿಯೆ .ಎಲ್ಲಿಯವರೆಗೆ ದೇಹತ್ಮಜ್ಞಾನದ ಬೆಳಕನ್ನು ಹೊಂದಿ, ಪರಮಾತ್ಮನಿಗೆ ಶರಣಾಗುವುದಿಲ್ಲವೋ, ಅಲ್ಲಿಯವರೆಗೆ ಮುಕ್ತಿ ಇಲ್ಲ. ಸತ್ಯಕ್ಕೆ ಶರಣಾಗುವುದು ಸಾಧಕನ ಲಕ್ಷಣ. ಅರ್ಜುನ (ನರ) ಶ್ರೀ ಕೃಷ್ಣ (ನಾರಾಯಣ)ನಿಗೆ ಶರಣಾಗುವ ತನಕ, ಗೀತೋಪದೇಶ ಪ್ರಾರಂಭವಾಗುವುದಿಲ್ಲ ಅಲ್ಲವೇ?
ಮುಂಡುವರೆಯುವುದು …
ಡಾ|| ನಾಗೇಶ್ ಎಲ್ ಅವರ ಮನೆಯಲ್ಲಿ , ಒಂದು ದಿನದ ಸತ್ಸಂಗ , ದಿನಾಂಕ 20/12/2025 ರ ಶನಿವಾರ ನಡೆಯಿತು. ಅದರ ವಿಡಿಯೋ ಗಳನ್ನು ನೀವು , ಈ ಕೆಳಗಿನ ಲಿಂಕ್ ಗಳನ್ನು ಒತ್ತಿ, ಕೇಳಬಹುದು.
ಭಾಗ-1
ಭಾಗ-2
ಭಾಗ-3
ಭಾಗ -4
ಭಾಗ – 5
0 Comments