ಕಥೆ – ಸಂಬಂಧಗಳು 

ಲೇಖಕರು : ಡಾ|| ಎ ಎಸ್ ಚಂದ್ರಶೇಖರ ರಾವ್ 

ಮಾನವೀಯ ಮೌಲ್ಯಗಳಲ್ಲಿ ಸಂಬಂಧಗಳು ಮುಖ್ಯವಾದುದು. ಇತ್ತೀಚೆಗೆ ಸಂಬಂಧಗಳು ಮೌಲ್ಯ ಕಳೆದುಕೊಂಡಿವೆ ಎನಿಸುತ್ತದೆ. ಸಂಬಂಧಗಳು ಗಟ್ಟಿಯಾಗಿರಬೇಕಾದರೆ ಪರಸ್ಪರ ತ್ಯಾಗ ಮನೋಭಾವ ಇರಬೇಕು. ಸಂಬಂಧಗಳು ಗಂಡ-ಹೆಂಡತಿ, ಸ್ನೇಹಿತರು, ಪ್ರೇಮಿಗಳು, ತಂದೆ, ತಾಯಿ, ಮಕ್ಕಳು, ಸೋದರರು, ಸೋದರಿಯರು ಇತ್ಯಾದಿ ಇರಬಹುದು. ಸಂಬಂಧಗಳ ವಿಚಾರದಲ್ಲಿ ಎರಡು ಘಟನೆಗಳನ್ನು ಉದಾಹರಣೆಯಾಗಿ ತಿಳಿಸಬಹುದು.

ಆ ಬಡಾವಣೆಯಲ್ಲಿ ದೊಡ್ಡದೊಂದು ಪಾರ್ಕ್ ಇದೆ. ಅಲ್ಲಿ ಅನೇಕ ಹಿರಿಯ ನಾಗರಿಕರು, ಇತರರು ನಡೆದಾಡುವುದಕ್ಕೆ ಪ್ರತಿದಿನ ಬೆಳಗ್ಗೆ ಅಥವ ಸಂಜೆ ಬರುತ್ತಿರುತ್ತಾರೆ. ಅಲ್ಲಲ್ಲಿ ಕುಳಿತುಕೊಳ್ಳುವುದಕ್ಕೆ ಕಲ್ಲು ಬೆಂಚುಗಳನ್ನು ಹಾಕಿಸಿದ್ದಾರೆ. ಮೂಲೆಯಲ್ಲಿ ಹೆಚ್ಚು ಜನ ಓಡಾಡದೆ ಇರುವ ಜಾಗದಲ್ಲಿ ಇಬ್ಬರು ತರುಣ ತರುಣಿಯರು ಕುಳಿತು ಮಾತನಾಡಿಕೊಳ್ಳುತ್ತಿದ್ದರು. ಆ ಹುಡುಗಿಯನ್ನು ಎಲ್ಲೋ ನೋಡಿದ ನೆನಪು – ಪ್ರಾಯಶಃ ಪಕ್ಕದ ಬಡಾವಣೆಯವಳಿರಬಹುದಂತ ಈ ಹಿರಿಯ ನಾಗರಿಕರು ಊಹಿಸಿಕೊಂಡರು. ಈಗೆ ೨-೩ ದಿನದಿಂದ ಹುಡುಗಿಯೊಬ್ಬಳೇ ಅಲ್ಲಿ ಕುಳಿತು ಕಾಯುತ್ತಿದ್ದಳು. ಮೂರನೆಯ ದಿನ ಅವಳ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದಳು. ಹಿರಿಯರಿಗೆ ಅಯಾಚಿತವಾಗಿ ಕೇಳಿಸುತ್ತಿತ್ತು ‘ಈ ರೀತಿ ನನ್ನನ್ನು ನಡುನೀರಿನಲ್ಲಿ ಕೈ ಬಿಟ್ಟರೆ ನನ್ನಗತಿ ಏನು? ನಿನ್ನ ಪ್ರೀತಿ ಎಲ್ಲಿ ಹೋಯಿತು. ನಾನು ನಾಳೆ ನಾಡಿದ್ದು ಇಲ್ಲಿ ಕಾಯುತ್ತೇನೆ. ನೀನು ಬರದಿದ್ದರೆ ಮುಂದಿನ ಪರಿಣಾಮ ನೆಟ್ಟಗಿರುವುದಿಲ್ಲ”. ಈ ರೀತಿಯ ಮಾತುಗಳನ್ನು ಕೇಳಿ ಆ ಹಿರಿಯರು ಸ್ವಲ್ಪ ವಿಚಲಿತರಾದರು. ಆದರೆ ಅನೇಕ ನಾಗರಿಕರಂತೆ ಇನ್ನೊಬ್ಬರ ಉಸಾಬರಿ ನಮಗೇಕೆ? ಎಂತ ಸುಮ್ಮನಿದ್ದರು. ಮೂರನೆಯ ದಿನ ಪಕ್ಕದ ಬಡಾವಣೆಯ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳೆಂಬ ಸುದ್ದಿ ಬಂತು. ಈ ರೀತಿಯ ಪ್ರೇಮಿಗಳ ಸಂಬಂಧ ಕೊನೆಯಲ್ಲಿ ದುರಂತದಲ್ಲಿ ಪರ್ಯವಸಾನವಾಯಿತು. ನಾವು ಗೆಳೆಯರನ್ನು ಆರಿಸುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಒಳ್ಳೆಯ ಗೆಳೆಯರನ್ನೇ ಆರಿಸಬೇಕು.

ಇನ್ನೊಂದು ಘಟನೆ : ಇಬ್ಬರು ಇಂಜಿನಿಯರ್‌ಗಳು ವಿಜಾತಿಯವರು ಪ್ರೇಮಿಸಿ ಮದುವೆಯಾಗಿದ್ದರು. ಇಬ್ಬರಿಗೂ ಬೇರೆ ಬೇರೆ ಕಾರುಗಳಿದ್ದುವು. ಒಂದು ದಿನ ಆಕೆಗೆ ಕಾರು ಓಡಿಸುವಾಗ ಅಪಘಾತವಾಯಿತು. ಜೀವ ಉಳಿದದ್ದೇ ಹೆಚ್ಚು. ಆದರೆ ಕುತ್ತಿಗೆ ಮೂಳೆ – ನರಮಂಡಲಕ್ಕೆ ಏಟು ಬಿದ್ದು ಆಕೆಗೆ ಎರಡು ಕಾಲುಗಳ ನಿಯಂತ್ರಣ ತಪ್ಪಿತು. ತಳ್ಳುವ ಗಾಡಿ (ವೀಲ್ ಚೇರ್) ಉಪಯೋಗಿಸಿ ಆಫೀಸಿಗೆ ಹೋಗುವಂತಾಯಿತು. ಗಂಡ ಮೊದಲಿಗಿಂತ ಹೆಚ್ಚು ಪ್ರೀತಿ ತೋರಿಸಿ ಆಕೆಗೆ ಆಸರೆಯಾಗಿ ನಿಂತು ಎಲ್ಲ ರೀತಿಯ ಸಹಾಯ ಮಾಡಿ ತಾನೂ ಆಫೀಸಿಗೆ ಹೋಗಿ ತುಂಬ ಶ್ರೀಮಂತನಾದ. ಸುಮಾರು ೨೫ ವರ್ಷ ಈ ರೀತಿ ಸಂಸಾರ ಮಾಡಿ ಕೊಂಡಿದ್ದರು. ಇಬ್ಬರು ಪ್ರೀತಿಯ ಮಕ್ಕಳು. ವಿದ್ಯಾಭ್ಯಾಸ ಮುಗಿಸಿದ್ದಾರೆ. ಇಂತಹ ಸಂಬಂಧಗಳಿಗೆ ಬೆಲೆ ಇದೆ.

ಈಗಿನ ಕಾಲದಲ್ಲಿ ಸಂಬಂಧಗಳ ಮೌಲ್ಯ ನಶಿಸುತ್ತಿದೆ. ಕ್ಷುಲ್ಲಕ ಕಾರಣಗಳಿಂದ ವಿವಾಹ ವಿಚ್ಛೇದನ ಪಡೆಯುವುದು. ತಂದೆ ತಾಯಿಯರನ್ನು ಅಗಲಿ ವಿದೇಶಕ್ಕೆ ಹೋಗಿ ಕಲ್ಲೇ ನೆಲೆಸುವುದು ಇಂತಹವು ಬಹಳಷ್ಟು ಇವೆ. ಅಣ್ಣ ತಮ್ಮಂದಿರ ಜಗಳ ಆಸ್ತಿಗಾಗಿ ಇದು ಪುರಾತನ ಕಾಲದಿಂದ ಇದ್ದು ಈಗ ಈ ಬಗೆಯ ಪ್ರಕರಣಗಳು ಹೆಚ್ಚಾಗಿದೆ.

ಈ ರೀತಿ ಸಂಬಂಧಗಳು ಗಟ್ಟಿಯಾಗಿ ಇರಬೇಕಾದರೆ ಏನು ಮಾಡಬೇಕು? ಇದು ಗಂಭೀರವಾದ ಸಮಸ್ಯೆ. ವಿಚಾರ ಮಾಡುವಂತಹದ್ದು.


0 Comments

Leave a Reply

Avatar placeholder

Your email address will not be published. Required fields are marked *